ವಿದ್ಯಾರ್ಥಿನಿಯರೇ ಗಮನಿಸಿ : ಶಾಲೆಗಳಲ್ಲಿ ಇನ್ನು ಮುಂದೆ ಸ್ವಯಂ ರಕ್ಷಣೆ ತರಬೇತಿ ಆರಂಭ – ಸುದ್ದಿಜಾಲ ನ್ಯೂಸ್

ದುಷ್ಕರ್ಮಿಗಳ ದಾಳಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹಾಗೂ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಸಾಮರ್ಥ್ಯವನ್ನು ಹೊಂದುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರವು ಸ್ವಯಂ ರಕ್ಷಣೆ ತಂತ್ರಗಳ ಬಗ್ಗೆ ವಿಶೇಷ ತರಬೇತಿ ನೀಡಲು ನಿರ್ಧರಿಸಿದೆ ‌

ಈ ತಿಂಗಳ ಮೊದಲ ವಾರದಿಂದಲೇ ಈ ತರಗತಿಗಳು ಪ್ರಾರಂಭಗೊಳ್ಳಲಿದೆ. ರಾಜ್ಯದ ಸರಕಾರಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ನಾಲ್ಕು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ವಿಶೇಷ ತರಬೇತಿಯ ಪ್ರಯೋಜನವನ್ನು ಪಡೆಯಲಿದ್ದಾರೆ. ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ. ಈ ತರಬೇತಿಯಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ, ಟೇಕ್ವಾಂಡೋ ಮತ್ತು ಜೂಡೋ ಕಲಿಸಲಾಗುವುದು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್ ಗಳಲ್ಲಿ ವಾಸಿಸುವ ವಿದ್ಯಾರ್ಥಿನಿಯರು ಹಾಗೂ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದವರು ಕೂಡ ಈ ತರಬೇತಿಯನ್ನು ಪಡೆಯಬಹುದು.

ಈ ವಿಶೇಷ ತರಬೇತಿಗಾಗಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಎರಡು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ತರಬೇತುದಾರರಿಗೆ ಪ್ರತಿ ತರಗತಿಗೆ ರೂ. 200 ಗೌರವಧನ ನೀಡಲಾಗುವುದು. 4245 ಸರಕಾರಿ ಪ್ರೌಢಶಾಲೆಗಳು ಮತ್ತು 441 ಪದವಿಪೂರ್ವ ಕಾಲೇಜುಗಳ ಬಾಲಕಿಯರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ.

ಈ ತರಬೇತಿಯನ್ನು ನೀಡಲು ತರಬೇತುದಾತರು ಪ್ರತಿ ಹಾಸ್ಟೆಲ್ ಗೆ ವಾರಕ್ಕೆ ಎರಡು ಬಾರಿ ಮತ್ತು ತಿಂಗಳಿಗೆ ಎಂಟು ಬಾರಿ ಭೇಟಿ ನೀಡಬೇಕು. 45 ನಿಮಿಷ ಅವಧಿಯ ಎರಡು ತರಗತಿಗಳನ್ನು ಆಯೋಜಿಸಬೇಕು 20 ಕ್ಲಾಸ್ ಗಳು ಮೂರು ತಿಂಗಳಲ್ಲಿ ಪೂರ್ಣಗೊಳ್ಳಬೇಕು ಎಂಬುದಾಗಿ ಸುತ್ತೋಲೆಯಲ್ಲಿ ವಿವರಿಸಲಾಗಿದೆ. ಈ ಕೋರ್ಸ್ ಪ್ರಾರಂಭವಾಗುವ ಮೊದಲು ಪ್ರತಿ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.

ಜನವರಿ‌1, 2022 ರಿಂದ ಮಾರ್ಚ್ 31, 2022 ರವರೆಗೆ ಈ ತರಬೇತಿ ಕಾರ್ಯಕ್ರಮ ನಡೆಯುತ್ತದೆ. ಕರ್ನಾಟಕದಲ್ಲಿ ಈ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಸೇರಿದ 629 ಹಾಸ್ಟೆಲ್ ಗಳಲ್ಲಿ ಸುಮಾರು 69,867 ವಿದ್ಯಾರ್ಥಿಗಳಿ ಮತ್ತು ಸಮಾಜ ಕಲ್ಯಾಣ ಇಲಾಖೆಯ 69,867 ಸಂಖ್ಯೆಯ ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ.

ಈ ಕಾರ್ಯಕ್ರಮವು ಹೆಣ್ಣುಮಕ್ಕಳಿಗೆ ಯಾವುದೇ ಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಆತ್ಮವಿಶ್ವಾಸವನ್ನು ತರುತ್ತದೆ. ನಾವು ಈಗಾಗಲೇ ಮಾರ್ಷಲ್ ಆರ್ಟ್ಸ್ ನಲ್ಲಿ ತರಬೇತುದಾರರನ್ನು ಆಯ್ಕೆ ಮಾಡಿದ್ದೇವೆ. ಈ ಕಾರ್ಯಕ್ರಮವು ಗ್ರಾಮೀಣ ಹೆಣ್ಣುಮಕ್ಕಳಲ್ಲಿ ಕಾಣೆಯಾಗಿರುವ ನಾಯಕತ್ವದ ಕೌಶಲ್ಯಗಳನ್ನು ಸಹ ಅಭಿವೃದ್ಧಿ ಪಡಿಸುತ್ತದೆ. ತುರ್ತು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಹಾಗಾಗಿ ಅಪರಾಧಿಗಳನ್ನು ನಿಭಾಯಿಸುವ ಮಾರ್ಗಗಳನ್ನು ತರಬೇತುದಾರರಿಗೆ ಕಲಿಸಲಾಗುತ್ತದೆ ” ಎಂದು ಜಿಲ್ಲಾ ಕಲ್ಯಾಣ ಅಧಿಕಾರಿ ರೇಷ್ಮಾ ಕೌಸರ್ ಹೇಳಿದ್ದಾರೆ.