ದಕ್ಷಿಣ ಕನ್ನಡದಲ್ಲಿ ಕೊರೋನಾ ಹೆಚ್ಚಳದಿಂದಾಗಿ ವಾರಾಂತ್ಯ ದೇವಾಲಯಗಳು ಬಂದ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ – 19 ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಜಿಲ್ಲೆಯ ದೇವಸ್ಥಾನಗಳಿಗೆ ಆಗಸ್ಟ್ 15 ರವರೆಗೆ ಕೆಲವು ನಿರ್ಬಂಧಗಳನ್ನು ಮಾಡಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು ದೇವಸ್ಥಾನವು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ತೆರೆದಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಬುಧವಾರ ಆದೇಶ ಹೊರಡಿಸಿದ್ದಾರೆ.

ತೀರ್ಥ ಪ್ರಸಾದ, ಅನ್ನಸಂತರ್ಪಣೆ ಭಕ್ತರಿಗೆ ಲಭ್ಯವಿರುವುದಿಲ್ಲ. ಸಾಮಾಜಿಕ ಅಂತರ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಭಕ್ತರು ಅನುಸರಿಸಬೇಕು.

ಶನಿವಾರ ಮತ್ತು ಭಾನುವಾರ ದೇವಾಲಯದ ಅರ್ಚಕರಿಗೆ ಮಾತ್ರ ದೈನಂದಿನ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿರುವುದರಿಂದ ಶನಿವಾರ ಮತ್ತು ಭಾನುವಾರ ದೇವಸ್ಥಾನ ಭಕ್ತಾಧಿಗಳಿಗೆ ಸಂಪೂರ್ಣ ಬಂದ್ ಆಗಿರುತ್ತದೆ.ಇದರ ಜೊತೆಗೆ ವಾರಾಂತ್ಯದಲ್ಲಿ ಅತಿಥಿಗೃಹಗಳಲ್ಲಿ ಉಳಿಯಲು ಅವಕಾಶವಿಲ್ಲ. ವಾರಾಂತ್ಯ ಹೊರತುಪಡಿಸಿ ಉಳಿದ ದಿನಗಳಲ್ಲಿ ಅತಿಥಿಗೃಹಗಳಲ್ಲಿ ಉಳಿಯಲು ಇಚ್ಛಿಸುವ ಭಕ್ತರು 72 ಗಂಟೆಗೂ ಮೊದಲು ಆರ್ ಟಿಪಿಸಿಆರ್ ನೆಗೆಟಿವ್ ವರದಿಯ ಕಡ್ಡಾಯವಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.