‘RTE’ ದಾಖಲಾತಿ : ಮಕ್ಕಳನ್ನು ಶಾಲೆಗೆ ಸೇರಿಸಲು ಇಚ್ಛೆ ಪಡುವ ಪೋಷಕರಿಗೆ ಮುಖ್ಯವಾದ ಮಾಹಿತಿ – ಸುದ್ದಿಜಾಲ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ 2022-23 ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ ( RTE) ಮೂಲಕ ಪ್ರವೇಶ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಮೊದಲ ಹಂತವಾಗಿ ಶಾಲೆಗಳ ಮ್ಯಾಪಿಂಗ್ ಮಾಡಲು ನಿರ್ಧರಿಸಿದೆ.

ಆರ್ ಟಿಇ ಪ್ರವೇಶಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಿಸಿದ ಕಂದಾಯ ಗ್ರಾಮದ ಭೌಗೋಳಿಕ ಗಡಿ, ನಗರಸಭೆ ಮುನ್ಸಿಪಲ್ ಕೌನ್ಸೆಲ್ ಮತ್ತು ಪಟ್ಟಣ ಪಂಚಾಯಿತಿ ಭೌಗೋಳಿಕ ಗಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ನ ಭೌಗೋಳಿಕ ಗಡಿ ಆಧಾರದ ಮೇಲೆ ಶಾಲೆಗಳನ್ನು ಗುರುತಿಸಲಾಗಿದೆ.

ಅರ್ಹ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳನ್ನು ಮ್ಯಾಪಿಂಗ್ ಮಾಡಲಾಗಿದ್ದು, ಶೇ. 25 ರಷ್ಟು ಸೀಟುಗಳ‌ ಹಂಚಿಕೆ ಮಾಡಲಾಗಿದೆ. ಆರ್ ಟಿಇ ಪ್ರವೇಶ ಪ್ರಕ್ರಿಯೆ ಸಿದ್ಧತೆ ಬಗ್ಗೆ ಚರ್ಚಿಸಲು ಜನವರಿ 10 ರಂದು ಎಲ್ಲ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆರ್ ಟಿಇ ನೋಡಲ್ ಅಧಿಕಾರಿಗಳೊಂದಿಗೆ ಆನ್ಲೈನ್ ನಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ.

ಉಚಿತ ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ರ ಯಶಸ್ವಿ ಅನುಷ್ಠಾನದ ಪ್ರಗತಿ ನೀತಿ ನಿರ್ದೇಶನ ನೀಡಲು ಸಲಹಾ ಸಮಿತಿ ರಚಿಸಿ ಸರಕಾರ ಆದೇಶಿಸಿದೆ‌.