ಒತ್ತಡ ತರುವ ಇಂಟರ್ವ್ಯೂ ಪ್ರಶ್ನೆ, ಉದ್ಯೋಗಾರ್ಥಿಗಳು ಓದಲೇಬೇಕಾದ ವಿಷಯ

ವಿವಿಧ ಉದ್ಯೋಗ ಸಂದರ್ಶನಗಳಲ್ಲಿಕೇಳುವ ಸಂಭಾವ್ಯ ಪ್ರಶ್ನೆಗಳ ಬಗ್ಗೆ ನಿಮಗೆ ಗೊತ್ತಿರಬಹುದು. ನಿಮ್ಮ ಬಗ್ಗೆ ಹೇಳಿ, ನಿಮ್ಮ ಸಾಮರ್ಥ್ಯ‌ ಏನು?, ನಿಮ್ಮ ವೀಕ್‌ನೆಸ್‌ ಏನು? ಹಿಂದಿನ ಕೆಲಸ ಯಾಕೆ ಬಿಟ್ಟಿರಿ?… ಸರಳವಾಗಿ ಕಾಣುವ ಆದರೆ ಉತ್ತರಿಸಲು ಕಷ್ಟವಿರುವ ಪ್ರಶ್ನೆಗಳಿಗೆ ಉತ್ತರಿಸಲು ಅಭ್ಯರ್ಥಿಗಳು ಸಾಕಷ್ಟು ಸಿದ್ಧತೆ ನಡೆಸಿಕೊಂಡು ಹೋಗುತ್ತಾರೆ.

ಆದರೆ, ಕೆಲವು ಕಂಪನಿಗಳು ಅಭ್ಯರ್ಥಿಗಳ ಒತ್ತಡವನ್ನು ತಾಳಿಕೊಳ್ಳುವ ಅಥವಾ ಇಂತಹ ಒತ್ತಡದಲ್ಲಿಯೂ ಯಾವ ರೀತಿಯ ಮನಸ್ಥಿತಿ ಹೊಂದಿರುತ್ತಾರೆ ಎಂದು ತಿಳಿದುಕೊಳ್ಳಲು ಬಯಸುತ್ತಾರೆ. ಅನಿರೀಕ್ಷಿತ ಸಮಯದಲ್ಲಿಉದ್ಯೋಗಿಯು ಯಾವ ರೀತಿ ಕೆಲಸ ಮಾಡಬಹುದು ಎಂದು ತಿಳಿದುಕೊಳ್ಳುವುದು ಸ್ಟ್ರೆಸ್‌ ಇಂಟರ್‌ವ್ಯೂನ ಪ್ರಮುಖ ಉದ್ದೇಶವಾಗಿದೆ. ವಿವಿಧ ಉದ್ಯೋಗ ಸಂದರ್ಶನಗಳಲ್ಲಿಕೇಳಿದ ಸ್ಟ್ರೆಸ್‌ ಇಂಟರ್‌ವ್ಯೂ ಪ್ರಶ್ನೆಗಳು ಮತ್ತು ಅವುಗಳಿಗೆ ನೀಡಬಹುದಾದ ಸಂಭಾವ್ಯ ಉತ್ತರಗಳು ಇಲ್ಲಿವೆ.

***

ಈ ಉದ್ಯೋಗ ಸಂದರ್ಶನಕ್ಕೆ ನಿಮ್ಮನ್ನು ರಿಜೆಕ್ಟ್ ಮಾಡಿದರೆ ನಿಮಗೆ ಏನೆನಿಸಬಹುದು?

ಸಂದರ್ಶನ ಮಾಡುವವರ ಬಾಯಲ್ಲಿ ಇಂತಹ ಮಾತೊಂದು ಕೇಳಿದರೆ ಸಂದರ್ಶನಕ್ಕೆ ಕೂತ ನಿಮ್ಮ ಮನಸ್ಸಿನಲ್ಲಿಯಾವೆಲ್ಲಭಾವ ಮೂಡಬಹುದು? ಈಗಾಗಲೇ ಉದ್ಯೋಗ ಬಿಟ್ಟಿದ್ದರೆ, ಅಯ್ಯೋ ಈ ಕೆಲಸವೂ ಹೋಯ್ತೇ, ನನ್ನ  ಇಎಂಐ, ನನ್ನ ಸಾಲ, ನನ್ನ ಫ್ಯಾಮಿಲಿ… ಇವೆಲ್ಲದರ ಕತೆಯೇನು… ಎಂದು ನೆನಪಾಗಿ ದುಃಖ ಉಕ್ಕಿಬರಬಹುದು.

ನೆನಪಿಡಿ, ಈ ರೀತಿಯ ಪ್ರಶ್ನೆ ಕೇಳಿದ್ದಾರೆ ಎಂದರೆ ನಿಮ್ಮನ್ನು ರಿಜೆಕ್ಟ್ ಮಾಡಿದ್ದಾರೆ ಎಂದಲ್ಲ. ನಿರಾಕರಣೆಯನ್ನು ಹೇಗೆ ಸ್ವೀಕರಿಸುವಿರಿ ಎಂದು ನಿಮ್ಮನ್ನು ಪರೀಕ್ಷಿಸಲು ಇಂತಹ ಪ್ರಶ್ನೆಯನ್ನು ಕೇಳುತ್ತಾರೆ. ಇಂತಹ ಪ್ರಶ್ನೆಯನ್ನು ಕೇಳಿದಾಗ ಬೇಸರವಾದರೂ, ಶಾಂತವಾಗಿ ಮತ್ತು ಭರವಸೆ ಕಳೆದುಕೊಳ್ಳದೆ ಉತ್ತರಿಸಿ. ನಿಮ್ಮ ಆಲೋಚನೆಗಳನ್ನು ನೆನಪಿಸಿಕೊಳ್ಳಲು ಕೆಲವು ಸೆಕೆಂಡ್‌ ತೆಗೆದುಕೊಳ್ಳಿ. ನಿರಾಕರಣೆಯನ್ನು ಗೌರವದಿಂದ ಸ್ವೀಕರಿಸುವ ನಿಮ್ಮ ಮನೋಭಾವವನ್ನು ಸಾಬೀತುಪಡಿಸಿ.

ಹೀಗೆ ಉತ್ತರಿಸಿ ನೋಡಿ

ನಾನು ನಿಮ್ಮ ಸಂಸ್ಥೆಯೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಮತ್ತು ಈ ಉದ್ಯೋಗಕ್ಕೆ ಆಯ್ಕೆಯಾಗುವುದು ನನಗೆ ಸೂಕ್ತವಾಗಿರುತ್ತದೆ. ಆದರೂ, ಎಲ್ಲಾದರೂ ನಾನು ಆಯ್ಕೆಯಾಗದೆ ಇದ್ದರೆ ನಿಮ್ಮ ನಿರ್ಧಾರವನ್ನು ಗೌರವಿಸುತ್ತೇನೆ. ಮಾತ್ರವಲ್ಲದೆ, ಯಾವ ಏರಿಯಾದಲ್ಲಿನಾನು ಪ್ರಗತಿ ಕಾಣಬೇಕು ಎಂದು ಗುರುತಿಸಲು ಬಯಸುತ್ತೇನೆ, ಅವನ್ನು ಉತ್ತಮಪಡಿಸಲು ಪ್ರಯತ್ನಿಸುತ್ತೇನೆ.

***

ಈ ರೆಸ್ಯೂಂನಲ್ಲಿ ಇಲ್ಲದ, ನಿಮ್ಮ ಬಗೆಗಿನ ವಿವರ ನೀಡಿ?

ಈ ಪ್ರಶ್ನೆ ಕೇಳಿದಾಗ ನಿಮಗೆ ಗೊಂದಲವಾಗಬಹುದು. ನನ್ನ ವೃತ್ತಿ, ಕೌಶಲ ಸೇರಿದಂತೆ ಬಹುತೇಕ ಮಾಹಿತಿಗಳನ್ನು ಈ ರೆಸ್ಯೂಂನಲ್ಲಿನೀಡಿದ್ದೇನೆ. ಇನ್ನು ರೆಸ್ಯೂಂನಲ್ಲಿಇಲ್ಲದ ಯಾವ ವಿಷಯವನ್ನು ಹೇಳಲಿ ಎಂಬ ಗೊಂದಲವಾಗಬಹುದು. ನೀವು ಕಂಪನಿಗೆ ಎಷ್ಟು ಸೂಕ್ತವಾಗಿದ್ದೀರಿ ಎಂದು ತಿಳಿದುಕೊಳ್ಳುವ ಸಲುವಾಗಿ ಈ ರೀತಿಯ ಪ್ರಶ್ನೆಯನ್ನು ಕೇಳಲಾಗುತ್ತದೆ. 

ಹೀಗೆ ಉತ್ತರ ನೀಡಿ ನೋಡಿ

ನಾನು ಟೀಮ್‌ ಪ್ಲೇಯರ್‌. ಯಾವಾಗಲೂ ಸಂಸ್ಥೆಗೆ ಉತ್ತಮವಾಗುವ ರೀತಿಯಲ್ಲಿಕೆಲಸ ಮಾಡುತ್ತೇನೆ. ನನಗೆ ಇರುವ ಕುತೂಹಲವು ಅನನ್ಯ ಕೆಲಸವನ್ನು ನನ್ನಿಂದ ಮಾಡಿಸುತ್ತದೆ. ಉದಾಹರಣೆಗೆ, ನಾನು ಈ ಹಿಂದೆ ಪ್ರಾಜೆಕ್ಟ್ ಡೆವಲಪರ್‌ ಆಗಿದ್ದೆ. ಆದರೆ, ನನಗೆ ಸಾಫ್ಟ್‌ವೇರ್‌ ಕ್ಯೂಎ ಬಗ್ಗೆಯೂ ಜ್ಞಾನವಿತ್ತು. ಒಂದು ಪ್ರಾಡಕ್ಟ್ Çಜ್ಞಂಚ್‌ ಸಮಯದಲ್ಲಿನಾನು ಟೆಕ್‌ ತಂಡಕ್ಕೂ ನೆರವು ನೀಡಿದ್ದೆ. ಬಳಿಕ ನನ್ನನ್ನು ಕ್ಯೂಎ ತಂಡದ ಆಂತರಿಕ ವಿಭಾಗಕ್ಕೆ ಸೇರಿಸಿಕೊಂಡರು. ನನ್ನ ಮುಖ್ಯವಾದ ಕೆಲಸಕ್ಕೆ ತೊಂದರೆಯಾಗದಂತೆ ಉಳಿದ ಸಮಯದಲ್ಲಿನಾನು ಈ ತಂಡದಲ್ಲಿಯೂ ಕೆಲಸ ಮಾಡುತ್ತಿದ್ದೆ.

***

ನೀವು ನಿಮ್ಮ ಕರಿಯರ್‌ನಲ್ಲಿಹೆಚ್ಚು ಸಾಧನೆ ಮಾಡಿಲ್ಲಯಾಕೆ?

ನಾನು ಎಷ್ಟು ಸಾಧನೆ ಮಾಡಿದ್ದೀನಿ ಎಂದು ನನಗೆ ಗೊತ್ತು, ನನ್ನ ಸಾಧನೆಯನ್ನು ಲೆಕ್ಕಕ್ಕೆ ಇಲ್ಲದಂತೆ ಈ ಸಂದರ್ಶಕ ಮಾತನಾಡುತ್ತಾನಲ್ವ? ಎಂದು ನಿಮಗೆ ಕೋಪ ಬರಬಹುದು. ಸ್ಟ್ರೆಸ್‌ ಸಂದರ್ಶನ ಇರುವುದೇ ಹಾಗೆ, ಅಲ್ಲಿಕೆಲವೊಮ್ಮೆ ತೀರಾ ವೈಯಕ್ತಿಕ ಪ್ರಶ್ನೆಗಳು ಇರಬಹುದು, ಕೆಲವೊಮ್ಮೆ  ಒರಟು ಪ್ರಶ್ನೆಗಳನ್ನು ಕೇಳಬಹುದು. ನಿಮಗೆ ನಿಮ್ಮ ಮೇಲೆ ಎಷ್ಟು ನಂಬಿಕೆ ಇದೆ ಮತ್ತು ನಿಮ್ಮ ಕೆಲಸದ ಮೇಲೆ ಎಷ್ಟು ನಂಬಿಕೆ ಇದೆ ಎನ್ನುವುದನ್ನು ತಿಳಿದುಕೊಳ್ಳುವ ಸಲುವಾಗಿ ಸಂದರ್ಶಕರು ಇಂತಹ ಪ್ರಶ್ನೆಗಳನ್ನು ಕೇಳುತ್ತಾರೆ.

ಈ ಪ್ರಶ್ನೆಯನ್ನು ಪರ್ಸನಾಲ್‌ ಆಗಿ ತೆಗೆದುಕೊಳ್ಳಬೇಡಿ, ಕಾನ್ಫಿಡೆನ್ಸ್‌ನಿಂದ ಉತ್ತರಿಸಿ. ನೀವು ಕಡಿಮೆ ಸಾಧಿಸಿದ್ದೀರಿ ಎಂಬ ಭಾವದಲ್ಲಿಹೇಳಿದರೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದರೆ, ಓವರ್‌ ಕಾನ್ಫಿಡೆನ್ಸ್‌ನಲ್ಲಿಉತ್ತರಿಸಬೇಡಿ. ವಿಶ್ವಾಸ ಮತ್ತು ನಮ್ರತೆಯಿಂದ ಉತ್ತರಿಸಲು ಪ್ರಯತ್ನಿಸಿ.

ಹೀಗೆ ಉತ್ತರಿಸಿ ನೋಡಿ

ಯಾವುದೇ ರೀತಿಯ ಸಾಧನೆಯು ಎಂದಿಗೂ ಸಾಕಾಗುವುದಿಲ್ಲಎನ್ನುವುದನ್ನು ನಾನು ನಂಬುತ್ತೇನೆ. ಒಬ್ಬ ವ್ಯಕ್ತಿಯು ಜೀವನದಲ್ಲಿಹೆಚ್ಚಿನದ್ದನ್ನು ಸಾಧಿಸಲು ಯಾವಾಗಲೂ ಪ್ರಯತ್ನಿಸಬೇಕು.

ನಾನು ಯಾವಾಗಲೂ ಅತ್ಯುತ್ತಮವಾಗಿ ಕೆಲಸ ಮಾಡಲಯ ಯತ್ನಿಸಿದ್ದೇನೆ. ಯಶಸ್ಸನ್ನು ಎಂಜಾಯ್‌ ಮಾಡಿದ್ದೇನೆ. ಉದಾಹರಣೆಗೆ, ನನ್ನ ಹಿಂದಿನ ಕಂಪನಿಯು ನನಗೆ ಮೋಸ್ಟ್‌ ವ್ಯಾಲ್ಯುವೇಬಲ್‌ ಪ್ಲೇಯರ್‌ ಅವಾರ್ಡ್‌ ನೀಡಿತ್ತು. ನಾನು ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ನಲ್ಲಿವಿನೂತನವಾಗಿ ಸಾಧನೆ ಮಾಡಿದ್ದಕ್ಕೆ ಈ ಅವಾರ್ಡ್‌ ದೊರಕಿತ್ತು.

ಮಾತ್ರವಲ್ಲದೆ ಒಂದೇ ವರ್ಷದಲ್ಲಿ ಪ್ರಮೋಷನ್‌ ದೊರಕಿತ್ತು. ನಾನು ನನ್ನ ಸಾಧನೆ ಕಡಿಮೆ ಎಂದು ಭಾವಿಸುವುದಿಲ್ಲ. ಆದರೆ, ಭವಿಷ್ಯದಲ್ಲಿಇನ್ನಷ್ಟು ಸಾಧಿಸಬೇಕಿದೆ ಎಂದು ತಿಳಿದಿದ್ದೇನೆ.

ಇತರೆ ಅಭ್ಯರ್ಥಿಗಳಿಗೆ ಹೋಲಿಸಿದರೆ ನೀವು ಹೇಗೆ ಅತ್ಯುತ್ತಮರೆಂದು ನನಗೆ ಅರ್ಥವಾಗುವುದಿಲ್ಲ. ನೀವು ಹೇಗೆ ಅವರೆಲ್ಲರಿಗಿಂತ ಬೆಸ್ಟ್‌?

ನಿಮಗೆ ಗೊತ್ತಿಲ್ಲದ ಇನ್ನಿತರ ಅಭ್ಯರ್ಥಿಗಳಿಗೆ ಹೋಲಿಸಿ ಇಂತಹ ಪ್ರಶ್ನೆಯನ್ನು ಸಂದರ್ಶಕರು ಕೇಳಬಹುದು. ನೀವು ಆ ಹುದ್ದೆಗೆ ಹೇಗೆ ಸೂಕ್ತ? ನಿಮ್ಮಲ್ಲಿರುವ ವಿಶೇಷವಾದ ಕೌಶಲಗಳು ಮತ್ತು ಸಾಮರ್ಥ್ಯ‌ಗಳು ಯಾವುವು ಎನ್ನುವುದನ್ನು ತಿಳಿಸಬೇಕು. ಇದಕ್ಕಾಗಿ ಸಂದರ್ಶನಕ್ಕೆ ಹೋಗುವ ಮೊದಲೇ ಕಂಪನಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿರಬೇಕು. ಅವರ ಆಬ್ಜೆಕ್ಟೀವ್‌ಗಳನ್ನು ಅರ್ಥಮಾಡಿಕೊಂಡಿರಬೇಕು. ನೀವು ಅರ್ಜಿ ಸಲ್ಲಿಸಿದ ಹುದ್ದೆಯು ಬಯಸುವ ಕೌಶಲಗಳು ಮತ್ತು ನಿಮ್ಮಲ್ಲಿರುವ ಕೌಶಲಗಳನ್ನು ಅರ್ಥಮಾಡಿಕೊಂಡು ಉತ್ತರಿಸಬೇಕು.

ಹೀಗೆ ಉತ್ತರಿಸಿ ನೋಡಿ

ಅವಶ್ಯವಿರುವ ಅನುಭವವನ್ನು ನಾನು ಹೊಂದಿದ್ದೇನೆ ಮತ್ತು ಇದರಲ್ಲಿರುವ ಸವಾಲುಗಳನ್ನೂ ಅರ್ಥಮಾಡಿಕೊಂಡಿದ್ದೇನೆ. ಈ ಹಿಂದೆ ನಾನು ಇಂತಹ ಪ್ರಾಜೆಕ್ಟ್ಗಳಲ್ಲಿಕೆಲಸ ಮಾಡಿದ್ದೇನೆ ಮತ್ತು ಅತ್ಯುತ್ತಮ ಫಲಿತಾಂಶ ತಂದುಕೊಟ್ಟಿದ್ದೇನೆ. ನಾನು ಟೀಮ್‌ ಪ್ಲೇಯರ್‌ ಮತ್ತು ಒತ್ತಡದ ಸಮಯದಲ್ಲಿಯೂ ಹೇಗೆ ಕೆಲಸ ಮಾಡಬೇಕು ಎನ್ನುವುದು ಗೊತ್ತು. ಈ ಹಿಂದೆ ಒಮ್ಮೆಯೂ ಡೆಡ್‌ಲೈನ್‌ ಮಿಸ್‌ ಮಾಡಿಕೊಂಡಿಲ್ಲ. ನನಗೆ ನನ್ನಲ್ಲಿರುವ ಕ್ರಿಯಾಶೀಲತೆಯ ಮೇಲೆ ನಂಬಿಕೆ ಇದೆ. ಇದರಿಂದ ನಾನು ಇತರರಿಂದ ಅತ್ಯುತ್ತಮವಾಗಿ ಸಾಧಿಸಿ ತೋರಿಸಬಲ್ಲೆ. ನನ್ನಲ್ಲಿರುವ ದೃಷ್ಟಿಕೋನ, ಕೌಶಲಗಳು ಈ ಹುದ್ದೆಗೆ ಸೂಕ್ತವಾಗಿದ್ದು, ನನ್ನನ್ನು ನೇಮಕ ಮಾಡುವುದು ಕಂಪನಿಗೆ ತಪ್ಪು ನಿರ್ಧಾರವಾಗದು.

ಇನ್ನಷ್ಟು ಪ್ರಶ್ನೆಗಳು

•             ಈ ಹಿಂದಿನ ಕಂಪನಿಯಲ್ಲಿನ ನಿಮ್ಮ ಪರ್ಫಾಮೆನ್ಸ್‌ಗೆ ಎಷ್ಟು ರೇಟಿಂಗ್‌ ನೀಡುವಿರಿ?

•             ನೀವು ನೀಡಿದ ಉತ್ತರವನ್ನು ಇನ್ನೊಮ್ಮೆ ಸ್ಪಷ್ಟವಾಗಿ ನೀಡುವಿರಾ?

•             ನಿಮ್ಮಲ್ಲಿಸೂಕ್ತವಾದ ಅನುಭವವಿಲ್ಲ, ನಾವು ಅನುಭವಿಗಳನ್ನು ಮಾತ್ರ ನೇಮಕ ಮಾಡುತ್ತೇವೆ, ನಾವು ಯಾಕೆ ನಿಮ್ಮನ್ನು ನೇಮಕ ಮಾಡಬೇಕು?

•             ಈ ಬಾಗಿಲಿನಿಂದ ಚೇರ್‌ಗೆ ಬರುವಾಗ ಎಷ್ಟು ಹೆಜ್ಜೆ ಹಾಕಿದ್ದೀರಿ?

ಈ ಅಂಶಗಳನ್ನು ಗಮನಿಸಿ

•             ಶಾಂತವಾಗಿರಿ, ಭಯ ಬೇಡ

•             ಪ್ರಶ್ನೆಯ ಹಿಂದಿರುವ ಉದ್ದೇಶವನ್ನು ಕಂಡುಹಿಡಿಯಿರಿ

•             ಸಮತೋಲನದ ಉತ್ತರ ನೀಡಿ

•             ತಾರ್ಕಿಕವಾಗಿ ಸರಿಯೆಂದೆನಿಸುವ ಉತ್ತರ ನೀಡಿ

•             ಸಕಾರಾತ್ಮಕ ಬಾಡಿ ಲ್ಯಾಂಗ್ವೇಜ್‌ ಇರಲಿ

•             ನೀವೂ ಪ್ರಶ್ನೆಗಳನ್ನು ಕೇಳಿ