ಆಫೀಸ್ ಹಂಗಿಲ್ಲದ ಬೊಂಬಾಟ್ ಜಾಬ್ಸ್, ಈ ಉದ್ಯೋಗಕ್ಕೆ ನೀವು ಪ್ರಯತ್ನಿಸಿರಿ

ಬಹುತೇಕರಿಗೆ ಏಸಿ ಕೊಠಡಿಯ ಆಫೀಸ್‌ ಡ್ಯೂಟಿ ಇಷ್ಟ. ಇನ್ನು ಕೆಲವರಿಗೆ ಒಂದೇ ಕಡೆ ನಾಲ್ಕು ಗೋಡೆಯ ನಡುವೆ ಕುಳಿತು ಕೆಲಸ ಮಾಡಲು ಇಷ್ಟವಿರುವುದಿಲ್ಲ. ಆಫೀಸ್‌ನಲ್ಲಿಕುಳಿತು ಕ್ಯಾಲೊರಿ ಕರಗದೆ ಬೊಜ್ಜು ಬೆಳೆಸಲು ಬಯಸದವರು ಆಫೀಸ್‌ ಹಂಗಿಲ್ಲದ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ವಿಮಾನ ಪೈಲೆಟ್‌

ಇವರಿಗೆ ಬಹುತೇಕ ಸಮಯ ವಿಮಾನದ ಕಾಕ್‌ಪಿಟ್ಟೇ ಆಫೀಸ್‌. ಆಕಾಶವೇ ಆಫೀಸ್‌ ಕಾರಿಡಾರ್‌. ಏರ್‌ಲೈನ್‌ ಮತ್ತು ಕಮರ್ಷಿಯಲ್‌ ವಿಮಾನಗಳು, ಹೆಲಿಕಾಪ್ಟರ್‌ಗಳು, ಕಾರ್ಗೊ ವಿಮಾನ ಇತ್ಯಾದಿಗಳನ್ನು ಚಲಾಯಿಸುವ ಪೈಲೆಟ್‌ಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ವೇತನವೂ ಬೊಂಬಾಟಾಗಿದೆ. 2020ರ ವೇಳೆಗೆ ಭಾರತವು ಜಗತ್ತಿನ 3ನೇ ಬೃಹತ್‌ ವೈಮಾನಿಕ ಮಾರುಕಟ್ಟೆಯಾಗುವ ಗುರಿ ಹೊಂದಿದೆ. ಮಹಿಳಾ ಪೈಲೆಟ್‌ಗಳಿಗೂ ಉತ್ತಮ ಬೇಡಿಕೆಯಿದೆ. ಮುಂದಿನ ಎರಡು ದಶಕದಲ್ಲಿಏಷ್ಯಾಕ್ಕೆ 2,26,000 ಪೈಲೆಟ್‌ಗಳು ಬೇಕಿದೆ.  ದೇಶದಲ್ಲಿಂದು ದೇಶಿ ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳು ಪೈಪೋಟಿಯಿಂದ ಕಾರ್ಯನಿರ್ವಹಿಸುತ್ತಿವೆ. ವಿಮಾನಗಳ ಸಂಖ್ಯೆಯೂ ದಿನೇ ದಿನೇ ಏರಿಕೆಯಾಗುತ್ತಿದೆ. ಹೀಗಾಗಿ ದೇಶದಲ್ಲಿಂದು ಪೈಲೆಟ್‌ ಮತ್ತು ಸಹ ಪೈಲೆಟ್‌ಗಳಿಗೆ ಬೇಡಿಕೆ ಹೆಚ್ಚಿದೆ.

ಏರ್‌ ಟ್ರಾಫಿಕ್‌ ಕಂಟ್ರೋಲರ್‌

ವಿಮಾನಗಳ ಆಗಮನ ಮತ್ತು ನಿರ್ಗಮನಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವ ಉದ್ಯೋಗ ಏರ್‌ ಟ್ರಾಫಿಕ್‌ ಕಂಟ್ರೋಲರ್‌ಗಳದದ್ದು. ಇವರಿಗೆ ಏರ್‌ ಕಂಟ್ರೋಲ್‌ ಟವರ್‌ಗಳೇ ಆಫೀಸ್‌. ತರಬೇತಿ ಅವಧಿಯಲ್ಲಿಟ್ರೈನಿಗಳಿಗೆ ಉಚಿತ ವಸತಿಯೊಂದಿಗೆ 7,500 ರೂ. ನೀಡಲಾಗುತ್ತದೆ. ಆರಂಭದಲ್ಲಿವೇತನ ಕಡಿಮೆಯಿದ್ದರೂ, ಭವಿಷ್ಯದಲ್ಲಿಒಳ್ಳೆಯ ವೇತನ ಪಡೆಯಬಹುದು. ವಿಮಾನ ನಿಲ್ದಾಣಗಳಲ್ಲಿಇರುವ ಆಕರ್ಷಕ ಮತ್ತು ಅತ್ಯಗತ್ಯ ಉದ್ಯೋಗಗಳಲ್ಲಿ‘ಏರ್‌ ಟ್ರಾಫಿಕ್‌ ಕಂಟ್ರೋಲರ್‌’ ಸಹ ಪ್ರಮುಖವಾದದ್ದು. ಈಗಾಗಲೇ ಆಕಾಶದಲ್ಲಿವಿಮಾನಗಳ ದಟ್ಟಣೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿವಿಮಾನಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಈ ಉದ್ಯೋಗಕ್ಕೆ ಉತ್ತಮ ಬೇಡಿಕೆಯಿದೆ.

ಅಟ್ಮಾಸ್ಪೆರಿಕ್‌ ಸೈಂಟಿಸ್ಟ್‌

ಹವಾಮಾನ ಮತ್ತು ವಾತಾವರಣವನ್ನು ಅಧ್ಯಯನ ನಡೆಸುವ ಅಟ್ಮಾಸ್ಪೆರಿಕ್‌ ಸೈಂಟಿಸ್ಟ್‌ಗೂ ಒಂದೇ ಕಡೆ ಆಫೀಸ್‌ನಲ್ಲಿಕುಳಿತು ಕೆಲಸ ಮಾಡುವಂತಿಲ್ಲ. ಭೂಮಿಯ ವಿವಿಧೆಡೆ ಸಂಚರಿಸಿ ಅಲ್ಲಿನ ಪರಿಸರ ಮತ್ತು ವಾತಾವರಣವನ್ನು ನಡೆಸಿ ಇವುಗಳಿಂದ ಮನುಷ್ಯರಿಗೆ ಮತ್ತು ಭೂಮಿಗೆ ಏನಾದರೂ ಹಾನಿಯಾಗುವುದೇ ಎಂದು ಅಧ್ಯಯನ ನಡೆಸುತ್ತಿರಬೇಕು. ವಾಯುಮಂಡಲ ವಿಜ್ಞಾನಿಗಳಿಗೂ ವೇತನ ಅತ್ಯುತ್ತಮವಾಗಿ ದೊರಕುತ್ತದೆ.

ಜೈವಿಕ ವಿಜ್ಞಾನಿ

ರಾಸಾಯನಿಕ ತತ್ವಗಳನ್ನು ಮತ್ತು ಜೈವಿಕ ಪ್ರಕ್ರಿಯೆಗಳನ್ನು ಅಧ್ಯಯನ ಮಾಡುವ ಮೂಲಕ ಹೊಸ ಔಷಧಿಗಳನ್ನು ಅಭಿವೃದ್ಧಿಪಡಿಸಲು ಜೈವಿಕ ವಿಜ್ಞಾನಿಗಳು ನೆರವಾಗುತ್ತಾರೆ. ಹೈಟೆಕ್‌ ಪ್ರಯೋಗಾಲಯಗಳ ಮೂಲಕ ಆಣ್ವಿಕ ಕಾರ್ಯವಿಧಾನಗಳ ಕುರಿತು ಹೆಚ್ಚಿನ ಅಧ್ಯಯನ ಮಾಡುವುದು ಸೇರಿದಂತೆ ಹಲವು ಕಾರ್ಯಗಳನ್ನು ಇವರು ಮಾಡುತ್ತಾರೆ. ಇವರಿಗೆ ಪ್ರಯೋಗಾಲಯವೇ ಆಫೀಸ್‌. ಒಬ್ಬರೇ ಕಾರ್ಯನಿರ್ವಹಿಸಬೇಕಾಗಬಹುದು ಅಥವಾ ತಂಡದೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ.

ಬಯೋಮೆಡಿಕಲ್‌ ಎಂಜಿನಿಯರ್‌

ಬಯೊಮೆಡಿಕಲ್‌ ಎಂಜಿನಿಯರಿಂಗ್‌ ಎಂದರೆ ಮೆಡಿಸಿನ್‌ ಮತ್ತು ಬಯೊಲಾಜಿ ಸಂಯುಕ್ತ ಅಧ್ಯಯನವಾಗಿದೆ. ಈ ಎಂಜಿನಿಯರಿಂಗ್‌ ಪದವೀಧರರು ಬಯೊಲಾಜಿಕಲ್‌ ಮತ್ತು ಮೆಡಿಕಲ್‌ ಸೈನ್ಸ್‌ಗೆ ತಮ್ಮ ವಿನ್ಯಾಸ ಕೌಶಲವನ್ನು ಅನ್ವಯಿಸುತ್ತಾರೆ. ಈ ಪದವೀಧರರು ಹೆಲ್ತ್‌ಕೇರ್‌ ಟ್ರೀಟ್‌ಮೆಂಟ್‌ ಟೆಕ್ನಾಲಜಿಯ ಸುಧಾರಣೆಗೆ ಬೆಂಬಲ ನೀಡುತ್ತಾರೆ. ಇಸಿಜಿ, ಎಂಆರ್‌ಐ ಮತ್ತು ಇತರೆ ಇಮೇಜಿಂಗ್‌ ಸಾಧನಗಳ ಅಭಿವೃದ್ಧಿಗೆ ನೆರವಾಗುತ್ತಾರೆ.

ಕನ್‌ಸ್ಟ್ರಕ್ಷನ್‌ ಮ್ಯಾನೇಜರ್‌

ಕಟ್ಟಡಗಳ ನಿರ್ಮಾಣ, ವಾಣಿಜ್ಯ ಅಥವಾ ಕೈಗಾರಿಕೆಗಳಿಗೆ ಸಂಬಂಧಪಟ್ಟ ನಿರ್ಮಾಣ ಕಾರ್ಯ, ರಸ್ತೆ, ಸೇತುವೆ ಇತ್ಯಾದಿಗಳ ನಿರ್ಮಾಣ ಉಸ್ತುವಾರಿ ನೋಡಿಕೊಳ್ಳುವ ಕನ್‌ಸ್ಟ್ರಕ್ಷನ್‌ ಮ್ಯಾನೇಜರ್‌ಗಳಿಗೂ ಆಫೀಸ್‌ನಲ್ಲಿಕುಳಿತು ಆರಾಮವಾಗಿ ಕೆಲಸ ಮಾಡುವಂತೆ ಇಲ್ಲ. ಆಗಾಗ ಆಫೀಸ್‌ಗೆ ರಿಪೋರ್ಟ್‌ ಮಾಡುವುದನ್ನು ಹೊರತುಪಡಿಸಿ ಬಹುತೇಕ ಸಮಯವನ್ನು ತಾವು ಪ್ರಾಜೆಕ್ಟ್ ಕೈಗೊಳ್ಳುತ್ತಿರುವ ಸೈಟ್‌ಗಳಲ್ಲಿಯೇ ಕಳೆಯಬೇಕಾಗುತ್ತದೆ. ಹಲವು ಪ್ರಾಜೆಕ್ಟ್ಗಳಿದ್ದಾಗ ಹಲವು ಸೈಟ್‌ಗಳಿಗೆ ಪ್ರಯಾಣ ಬೆಳೆಸುತ್ತ ಇರಬೇಕಾಗುತ್ತದೆ.

ಎಲಿವೇಟರ್‌ ನಿರ್ವಾಹಕರು

ಎಲಿವೇಟರ್‌ ಅನ್ನು ಇನ್‌ಸ್ಟಾಲ್‌ ಮಾಡುವವರು, ರಿಪೇರಿ ಮಾಡುವವರು ಮತ್ತು ನಿರ್ವಹಣೆ ಮಾಡುವವರಿಗೂ ಎಲಿವೇಟರೇ ಆಫೀಸ್‌. ಎಲಿವೇಟರ್‌, ಲಿಫ್ಟ್‌ ಇತ್ಯಾದಿಗಳೊಂದಿಗೆ ದಿನದ ಬಹುಸಮಯವನ್ನು ಕಳೆಯಬೇಕು. ಹೈಡ್ರಾಲಿಕ್ಸ್‌, ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಸಿಟಿ ಜ್ಞಾನ ಇರುವವರಿಗೆ ಸೂಕ್ತ ಉದ್ಯೋಗ.

ಎನ್ವಿರಾನ್‌ಮೆಂಟಲ್‌ ಎಂಜಿನಿಯರ್‌

ಪರಿಸರದ ಸಮಸ್ಯೆಗಳನ್ನು ಅಧ್ಯಯನ ಮಾಡುವುದು ಮತ್ತು ಅವುಗಳನ್ನು ಬಗೆಹರಿಸಲು ದಾರಿ ಹುಡುಕುವುದು ಎನ್ವಿರಾನ್‌ಮೆಂಟಲ್‌ ಎಂಜಿನಿಯರ್‌ಗಳ ಪ್ರಮುಖ ಕಾರ್ಯ. ಎಂಜಿನಿಯರಿಂಗ್‌, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ತತ್ವಗಳನ್ನು ಬಳಸಿ ವಸ್ತುಗಳ ಮರುಬಳಕೆ, ತ್ಯಾಜ್ಯ ವಿಲೇವಾರಿ, ಸಾರ್ವಜನಿಕ ಆರೋಗ್ಯ, ನೀರು, ವಾಯುಗುಣಮಟ್ಟವನ್ನು ಸುಧಾರಿಸುವ ಕಾರ್ಯವನ್ನು ಎನ್ವಿರಾನ್‌ಮೆಂಟಲ್‌ ಎಂಜಿನಿಯರ್‌ಗಳು ಮಾಡುತ್ತಾರೆ. ಬಹುತೇಕ ಈ ಉದ್ಯೋಗವು ಆಫೀಸ್‌ನಿಂದ ಹೊರಗೆ ಇರುತ್ತದೆ.

ಭೂಗೋಳಶಾಸ್ತ್ರಜ್ಞರು

ಭೂಮಿ, ಭೂಮಿಯ ಲಕ್ಷಣಗಳು, ಭೂವಾಸಿಗಳ ಕುರಿತು ಭೂಗೋಳಶಾಸ್ತ್ರಜ್ಞರು ಅಧ್ಯಯನ ಮಾಡುತ್ತಾರೆ. ಭೂಮಿಯ ವಿವಿಧ ಪ್ರದೇಶಗಳ ರಚನೆ, ವಿವಿಧ ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುವ ಅಂಶಗಳ ಅಧ್ಯಯನ ಸೇರಿದಂತೆ ಭೂಗೋಳಶಾಸ್ತ್ರಜ್ಞರ ಕಾರ್ಯವ್ಯಾಪ್ತಿ ವಿಸ್ತಾರವಾಗಿದೆ. ಭೂಗೋಳಶಾಸ್ತ್ರಜ್ಞರು ತಮ್ಮ ಕರಿಯರ್‌ನ ಬಹುಸಮಯವನ್ನು ಆಫೀಸ್‌ನ ಹೊರಗಡೆ ಕಳೆಯಬೇಕಾಗುತ್ತದೆ.

ಹೈಡ್ರೊಲಜಿಸ್ಟ್‌

ಜಲವಿಜ್ಞಾನಿಗಳ ಕಾರ್ಯಕ್ಷೇತ್ರವೂ ಆಫೀಸ್‌ನಿಂದ ಹೊರಗೆ ಹೆಚ್ಚಿರುತ್ತದೆ. ಪರಿಸರದ ಮೇಲೆ ನೀರಿನ ಪ್ರಭಾವ, ಪರಿಸರದಲ್ಲಿಆಗುವ ಬದಲಾವಣೆಯಿಂದ ನೀರಿನ ಪ್ರಮಾಣ ಮತ್ತು ಗುಣಮಟ್ಟದ ಮೇಲೆ ಆಗುವ ಪರಿಣಾಮಗಳನ್ನು ಇವರು ಅಧ್ಯಯನ ಮಾಡುತ್ತಾರೆ. ನೀರಿನ ಲಭ್ಯತೆ, ನೀರನ್ನು ಉಳಿಸಲು ಪರಿಹಾರ ನಿರ್ಣಯ ಇತ್ಯಾದಿಗಳು ಸೇರಿದಂತೆ ಜಲಸಂರಕ್ಷಣೆಗೆ ಬೇಕಾದ ಸಾಕಷ್ಟು ಕಾರ್ಯಗಳನ್ನು ಹೈಡ್ರೊಲಜಿಸ್ಟ್‌ಗಳು ಮಾಡುತ್ತಾರೆ.

ಗಣಿಗಾರಿಕೆ ಮತ್ತು ಭೂವೈಜ್ಞಾನಿಕ ಎಂಜಿನಿಯರ್‌

ಗಣಿಗಾರಿಕೆಗೆ ಸಂಬಂಧಪಟ್ಟ ನಿರ್ಮಾಣ ಪ್ರಕ್ರಿಯೆಗಳ ನಿಗಾ, ಗಣಿ ಕೆಲಸಗಾರರು, ಮ್ಯಾನೇಜರ್‌ಗಳು ಮತ್ತು ಇತರೆ ಎಂಜಿನಿಯರ್‌ಗಳಿಗೆ ಸಲಹೆ ನೀಡುವುದು ಸೇರಿದಂತೆ ಹಲವು ಕಾರ್ಯಗಳನ್ನು ಗಣಿಗಾರಿಕೆ ಮತ್ತು ಭೂವೈಜ್ಞಾನಿಕ ಎಂಜಿನಿಯರ್‌ಗಳು ಮಾಡುತ್ತಾರೆ. ಅತ್ಯುತ್ತಮ ವೇತನವಿರುವ ಈ ಉದ್ಯೋಗಿಗಳು ಬಹುತೇಕ ಸಮಯವನ್ನು ಗಣಿಕ್ಷೇತ್ರದಲ್ಲಿಯೇ ಕಳೆಯಬೇಕಾಗುತ್ತದೆ.

ಇದೇ ರೀತಿ, ನ್ಯೂಕ್ಲಿಯರ್‌ ಪವರ್‌ ಪ್ಲಾಂಟ್‌ ಆಪರೇಟರ್‌, ನರ್ಸ್‌, ಮಿಡ್‌ವೈಫ್‌, ಪೆಟ್ರೋಲಿಯಂ ಎಂಜಿನಿಯರ್‌, ಭೌತಶಾಸ್ತ್ರಜ್ಞರು, ಖಗೋಳಶಾಸ್ತ್ರಜ್ಞರು, ಸೇಲ್ಸ್‌ ಎಂಜಿನಿಯರ್‌ ಸೇರಿದಂತೆ ಇನ್ನೂ ಹಲವು ವೃತ್ತಿಗಳಿಗೆ ಆಫೀಸ್‌ ಹಂಗಿರುವುದಿಲ್ಲ. ನಾಲ್ಕು ಗೋಡೆಯ ನಡುವಿನ ಉದ್ಯೋಗ ಇಷ್ಟಪಡದವರು ಇಂತಹ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಹಲೋ, ಕಾಲ್ ಸೆಂಟರ್ ಜಾಬ್ ಬೇಕೆ? ಇದನ್ನೊಮ್ಮೆ ಓದಿ