ಎದೆಯಲ್ಲಿ ಕಫ ಕಟ್ಟಿಕೊಂಡಿದೆಯೇ? ಹಾಗಾದರೆ ಅದರ ನಿವಾರಣೆಗೆ ಇಲ್ಲಿವೆ ಮನೆಮದ್ದು

ಬದಲಾದ ಹವಾಮಾನ, ತಂಪಾದ ವಾತಾವರಣದ ಚಳಿಗಾಲದಲ್ಲಿ ಪ್ರಮುಖವಾಗಿ ನೆಗಡಿ, ಶೀತ, ಜ್ವರ, ಕೆಮ್ಮು, ಗಂಟಲು ನೋವು ಬಹುತೇಕರಿಗೆ ಸಾಮಾನ್ಯವಾಗಿ ಕಂಡು ಬರುತ್ತದೆ. ಗಂಟಲು ಹಾಗೂ ಎದೆಯಲ್ಲಿ ಕಫ ಇದ್ದರೆ ಮಾತ್ರ ಕೆಮ್ಮು ತೀವ್ರವಾಗುತ್ತದೆ. ಇದನ್ನು ಹಾಗೆ ಬಿಟ್ಟರೆ ಮುಂದೆ ಅಸ್ತಮಾ ಆಗಿ ಬದಲಾಗುತ್ತದೆ.

ಎದೆಯಲ್ಲಿ ಸೋಂಕು ಉಂಟಾಗಿರುವುದು ಖಚಿತವಾಗುತ್ತದೆ. ಇಂಥ ಸನ್ನಿವೇಶವನ್ನು ನಿಯಂತ್ರಿಸುವಲ್ಲಿ ಕೆಲವೊಂದು ಮನೆ ಮದ್ದುಗಳು ಪ್ರಯೋಜನಕ್ಕೆ ಬರುತ್ತವೆ.

ಮೆಂತ್ಯ ಕಾಳುಗಳ ಚಹಾ ತಯಾರಿಸಿ ಕುಡಿಯುವುದರಿಂದ ಉಸಿರಾಟನಾಳದಲ್ಲಿ ಸೋಂಕು ಮತ್ತು ಉರಿಯುತ ಉಂಟಾಗದಂತೆ ನೋಡಿಕೊಳ್ಳಬಹುದು. ಮೆಂತ್ಯ ಕಾಳುಗಳನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಎದ್ದು ಅದೇ ನೀರನ್ನು ಒಲೆಯ ಮೇಲೆ ಇಟ್ಟು ಕುದಿಸಿ ಸ್ವಲ್ಪ ಆರಿಸಿ ಅದಕ್ಕೆ ಜೇನುತುಪ್ಪ ಹಾಕಿ ಕುಡಿಯುವ ಅಭ್ಯಾಸ ಮಾಡಿಕೊಂಡಲ್ಲಿ ಸುಲಭವಾಗಿ ಎದೆಯ ಭಾಗದಲ್ಲಿ ಉಂಟಾದ ಸೋಂಕು ಕಡಿಮೆ ಆಗುವುದು.

ಉಸಿರಾಟದ ಸಮಸ್ಯೆ ಇದ್ದವರು ಶುಂಠಿ ಚಹಾ ಮಾಡಿಕೊಂಡು ಕುಡಿಯುವುದು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಎದೆಯ ಭಾಗದಲ್ಲಿ ಕಟ್ಟಿದ ಕಫ ತೆಗೆದುಹಾಕುವುದು ಮಾತ್ರವಲ್ಲದೆ ಎದೆ ಬಿಗಿತವನ್ನು ಕಡಿಮೆ ಮಾಡುತ್ತದೆ.

ಜೇನು ತುಪ್ಪ ಉಸಿರಾಟ ಸಮಸ್ಯೆಯನ್ನು ಮತ್ತು ಉಸಿರಾಟನಾಳದಲ್ಲಿ ಕಂಡುಬರುವ ಸೋಂಕನ್ನು ಇಲ್ಲವಾಗಿಸುತ್ತದೆ. ಗಂಟಲು ನೋವು ಮತ್ತು ಗಂಟಲಿನ ಭಾಗದಲ್ಲಿ ಕಿರಿಕಿರಿ ತಪ್ಪಿಸುತ್ತದೆ.

ಈರುಳ್ಳಿ ಗಂಟಲು ನೋವಿನ ಪರಿಹಾರದಲ್ಲಿ ಕೆಲಸ ಮಾಡುವುದು. ಗಂಟಲು ಕೆರೆತ ಹಾಗೂ ಎದೆ ಬಿಗಿತ ಸಮಸ್ಯೆಯನ್ನು ಸರಿ ಪಡಿಸುತ್ತದೆ. ನಿಂಬೆ ಹಣ್ಣಿನ ರಸ ಮತ್ತು ಜೇನುತುಪ್ಪದ ಜೊತೆಗೆ ಈರುಳ್ಳಿ ತುರಿದುಕೊಂಡು ಮಿಶ್ರಣ ಮಾಡಿ ಸೇವನೆ ಮಾಡುವುದರಿಂದ ಉತ್ತಮ ಪರಿಹಾರ ಸಿಗುವುದು.