ಇನ್ನು ಮುಂದೆ ಬೆಂಗಳೂರಿನಿಂದ ಕೊಡಗು- ಕಬಿನಿಗೆ ಹೆಲಿಕಾಪ್ಟರ್ ಸೇವೆ- ಸುದ್ದಿಜಾಲ ನ್ಯೂಸ್

‘ಬ್ಲೇಡ್’ ಇಂಡಿಯಾ ಕಂಪನಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಿದ್ದು, ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅಮೆರಿಕ ಮೂಲದ ಬ್ಲೇಡ್ ಇಂಡಿಯಾ ಸಂಸ್ಥೆ ಭಾರತದಲ್ಲಿ ಉದ್ಯಮ ನಡೆಸುತ್ತಿದೆ. ಸಂಚಾರ ದಟ್ಟಣೆ ಮತ್ತು ರಸ್ತೆಯ ಮೂಲಕ ತ್ವರಿತವಾಗಿ ತಲುಪಲಾಗದ ಸ್ಥಳಗಳಿಗೆ ಹೆಲಿಕಾಪ್ಟರ್ ಸೇವೆಯನ್ನು ಸಂಸ್ಥೆ ನೀಡುತ್ತಿದೆ.

2020 ಡಿಸೆಂಬರ್ ನಲ್ಲಿ ಬ್ಲೇಡ್ ಇಂಡಿಯಾ ವೀಕೆಂಡ್ ಪ್ರೈವೇಟ್ ಚಾರ್ಟರ್ ಸೇವೆಯನ್ನು ಆರಂಭಿಸುವ ಮೂಲಕ ಕರ್ನಾಟಕದಲ್ಲಿ ಉದ್ಯಮ ಆರಂಭಿಸಿತ್ತು. ಈಗ ಬೆಂಗಳೂರು – ಕೊಡಗು, ಬೆಂಗಳೂರು – ಕಬಿನಿ ನಡುವೆ ಹೆಲಿಕಾಪ್ಟರ್ ಸೇವೆ ಆರಂಭಿಸಿದೆ.

ಕರ್ನಾಟಕದಲ್ಲಿ ಕೆಲ ಅತ್ಯುತ್ತಮ ತಾಣಗಳಿವೆ. ಆದರೆ ಅಲ್ಲಿಗೆ ತಲುಪುವುದು ಕಷ್ಟ. ರಸ್ತೆ ಮೂಲಕ ಸಾಗುವುದಕ್ಕಿಂತ ಹೆಲಿಕಾಪ್ಟರ್ ನಲ್ಲಿ 6-7 ಗಂಟೆ ಪ್ರಯಾಣದ ಅವಧಿ ಕಡಿಮೆಯಾಗುತ್ತದೆ ಎಂದು ಹೆಲಿಕಾಪ್ಟರ್ ಸೇವೆ ಕುರಿತು ಬ್ಲೇಡ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಮಿತ್ ದತ್ತಾ ಮಾತನಾಡಿದರು.

ಬೆಂಗಳೂರು ನಗರದಿಂದ ಹೆಚ್ಚಿನ ಜನರು ಕೊಡಗು ಮತ್ತು ಕಬಿನಿ ಗೆ ಭೇಟಿ ನೀಡುತ್ತಾರೆ. ಆದ್ದರಿಂದ ಬ್ಲೇಡ್ ಇಂಡಿಯಾ ಈ ತಾಣಗಳಿಗೆ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಿದೆ.

ಕಂಪನಿಯ ವೆಬ್‌ಸೈಟ್‌ ನಲ್ಲಿ ದರ ಪಟ್ಟಿಯ ಕುರಿತು ಮಾಹಿತಿ ಇದೆ. ಬೆಂಗಳೂರಿನಿಂದ ಜಕ್ಕೂರು ಏರ್ ಬೇಸ್ ನಿಂದ ಕೊಡಗು ಮಾರ್ಗಕ್ಕೆ ಪ್ರತಿ ಸೀಟ್ ಗೆ 16,000 ರೂ. ನಿಗದಿ ಮಾಡಲಾಗಿದೆ.

ಜಕ್ಕೂರು ಏರ್ ಬೇಸ್ ನ್ನು ಹೆಲಿಕಾಪ್ಟರ್ ಗಳ ಟೇಕಾಫ್ ಮತ್ತು ಲ್ಯಾಂಡಿಂಗ್ ಗೆ ಬಳಕೆ ಮಾಡಿಕೊಳ್ಳಲು ಉದ್ದೇಶಿಸಿದೆ. ಗೋವಾ, ಪುದುಚೇರಿ, ಕೇರಳ ಮುಂತಾದ ಕಡೆಗಳಿಗೆ ಸಹ ಪ್ರವಾಸಿ ಹೆಲಿಕಾಪ್ಟರ್ ಸೇವೆ ಆರಂಭಿಸಲು ಉದ್ದೇಶಿಸಲಾಗಿದ್ದು, ಅದಕ್ಕೆ ಏರ್ ಬೇಸ್ ಬಳಕೆಯಾಗಲಿದೆ.