Relationship: ಸಂಬಂಧ: ಸಂಗಾತಿ ಜೊತೆ ಸಂಬಂಧ ಗಟ್ಟಿಯಾಗಿ ಉಳಿಸುವುದು ಹೇಗೆ?


ಗಂಡ-ಹೆಂಡತಿ ಸಂಬಂಧ ಉತ್ತಮವಾಗಿದ್ದರೆ ಜೀವನ ಸುಂದರವಾಗಿರುತ್ತದೆ. ಸಂಸಾರದ ಹಳಿ ತಪ್ಪಿದರೆ ಬಾಳು ಗೋಳಾಗುತ್ತದೆ. ಅದು ಆಗುವ ಮೊದಲೇ ನಾವು ಎಚ್ಚರಿಕೆಯಿಂದ ಇರಬೇಕು. ಪ್ರೀತಿ ಜೊತೆಗೆ ಕೆಲ ವಿಚಾರಗಳನ್ನು ತಿಳಿದುಕೊಂಡರೆ ನಿಮ್ಮ ಸಂಗಾತಿಯ ಜೊತೆ ಸುಖ ಜೀವನ ನಡೆಸಬಹುದು.


ಗಂಡ-ಹೆಂಡತಿ ನಡುವಿನ ಸಂಬಂಧಕ್ಕೆ ತುಂಬಾ ಮಹತ್ವವಿದ್ದು, ಪ್ರತಿಯೊಬ್ಬರ ಬಾಳಲ್ಲಿ ಜೀವನ ಸಂಗಾತಿಯ ಪಾತ್ರ ಪ್ರಮುಖವಾಗಿದೆ. ನೂರಾರು ಬಾರಿ ಯೋಚಿಸಿ ಒಬ್ಬರ ಬಾಳಲ್ಲಿ ಪ್ರವೇಶ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮೊದ-ಮೊದಲು ಪ್ರೀತಿ ಉಕ್ಕಿ ಹರಿಯುತ್ತಿರುತ್ತದೆ. ರೋಮಿಯೋ ಜೂಲಿಯೆಟ್ ತರ ಇದ್ದವರು ಬಳಿಕ ಹಾವು-ಮುಂಗುಸಿ ತರ ಕಚ್ಚಾಡುತ್ತಾರೆ. ತಮ್ಮ ಸಂಬಂಧ ಅನೋನ್ಯತೆಯಿಂದ ಕೂಡಿರಬೇಕು ಎಂದು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಆದರೆ ಅದು ಸುಲಭದ ವಿಚಾರ ಅಲ್ಲ. ಆದರೆ ಸದಾ ಪ್ರೀತಿಯ ಜೊತೆ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡರೆ ಗಂಡ-ಹೆಂಡತಿ ಸಂಬಂಧ ಗಟ್ಟಿಯಾಗಿ ಉಳಿಯುತ್ತದೆ.

ಸಂಗಾತಿಯ ಭಾವನೆ ಗೌರವಿಸಿ


ಎಲ್ಲಾ ಸಂಬಂಧಗಳಲ್ಲಿ ಭಾವನೆಗಳು ತುಂಬಾ ಮುಖ್ಯ. ಅದರಲ್ಲಿ ದಂಪತಿಯ ನಡುವೆ ಇದು ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಂಗಾತಿಯ ಭಾವನೆಗಳನ್ನು ಗೌರವಿಸುವುದನ್ನು ಮೊದಲು ಕಲಿಯಬೇಕು. ಒಂದು ವೇಳೆ ಅವರ ಭಾವನೆಯನ್ನು ನೋಯಿಸಿದರೆ ತಕ್ಷಣ ಕ್ಷಮೆ ಕೇಳಿ ಬಿಡಿ. ಮತ್ತು ಯಾವುದೇ ಸಂದರ್ಭದಲ್ಲಿಯೂ ಸಹ ನಿಮ್ಮ ಸಂಗಾತಿಯ ಪರವಾಗಿ ನಿಲ್ಲಲು, ಯಾವಾಗಲೂ ಅವರನ್ನು ಬಿಟ್ಟುಕೊಡಬೇಡಿ. ಇದರಿಂದ ನಿಮ್ಮ ಸಂಬಂಧವು ಮತ್ತಷ್ಟು ಬಲಗೊಂಡು ಪರಸ್ಪರ ಪ್ರೀತಿ ಇತ್ತು.

ಉತ್ತಮ ಸ್ನೇಹಿತರಾಗಿ


ನಿಮ್ಮ ಜೀವನದಲ್ಲಿ ನಿಮ್ಮ ಸಂಗಾತಿಯು ಪ್ರಮುಖ ಪಾತ್ರ ವಹಿಸುತ್ತಾರೆ. ನಿಮ್ಮ ಹೊಸ ಬಾಳಿನ ಹಾದಿಯಲ್ಲಿ ಅವರು ಸದಾ ಜೊತೆ ನಡೆಯುತ್ತಾರೆ. ಹೀಗಾಗಿ ಅವರಿಗೆ ತುಂಬಾ ಪ್ರಾಮುಖ್ಯತೆ ಕೊಡಿ. ಅವರೊಂದಿಗೆ ಸ್ನೇಹಿತರಂತೆ (Friends) ಇದ್ದು, ನಿಮ್ಮ ಪ್ರತಿಯೊಂದು ಸಣ್ಣ-ಪುಟ್ಟ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಸಂತೋಷ ಮತ್ತು ದುಃಖವನ್ನು ಹಂಚಿಕೊಳ್ಳುತ್ತಿರಿ.

ಪರಸ್ಪರ ನಂಬಿಕೆ ಇರಲಿ


ಯಾವುದೇ ಸಂಬಂಧಗಳು ಗಟ್ಟಿಯಾಗಿರಬೇಕಾದರೆ ನಂಬಿಕೆ ತುಂಬಾ ಮುಖ್ಯ. ಒಬ್ಬರು ಇನ್ನೊಬ್ಬರನ್ನು ನಂಬಿ ನಡೆದರೆ ಆರೋಗ್ಯಕರ ಸಂಬಂಧ ಉಳಿಯುತ್ತದೆ. ನಿಮ್ಮ ಸಂಗಾತಿಯು ಮುಕ್ತವಾಗಿ ಇರಲು ಬಿಡಿ. ಹಾಗೂ ನೀವು ಕೂಡ ಅವರೊಂದಿಗೆ ಮುಕ್ತವಾಗಿ ಮಾತನಾಡಿ ಏನೇ ವಿಚಾರ ಇದ್ದರೂ ಮೌನವಾಗಿ ಇರದೆ, ನೇರವಾಗಿ ಮಾತನಾಡಿ. ಪ್ರತಿಯೊಂದು ವಿಚಾರಲ್ಲಿಯೂ ಅವರನ್ನು ಬೆಂಬಲಿಸಿ, ಯಾವುದೇ ಕಾರಣಕ್ಕೂ ಇಬ್ಬರ ನಡುವೆ ಅನುಮಾನಕ್ಕೆ ಹಾದಿ ಮಾಡಿಕೊಡಬೇಡಿ.

ಉತ್ತಮ ಸಂವಹನ ರೂಢಿಸಿಕೊಳ್ಳಿ


ಗಂಡ-ಹೆಂಡತಿ ನಡುವೆ ಉತ್ತಮ ಸಂವಹನ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ಬೇಕು, ಬೇಡಗಳು, ಇಷ್ಟ, ಕಷ್ಟಗಳನ್ನು ಅವರಿಗೆ ಹೇಗೆ ತಿಳಿಸುವುದು ಎಂಬುದು ನಮ್ಮ ಕೈಯಲ್ಲಿದೆ. ನಿಮ್ಮ ಧಾಟಿ, ಮನಸ್ಸು ಹಾಳು ಮಾಡುವಂತಿದ್ದರೆ ಸಂಬಂಧದಲ್ಲಿ ಬಿರುಕು, ಭಿನ್ನಾಭಿಪ್ರಾಯ ಮೂಡಬಹುದು. ಹಾಗಾಗಿ ಪ್ರೀತಿಯಿಂದ ಮಾತನಾಡಿ. ಅದಲ್ಲದೆ ನಿಮ್ಮ ಸಂಗಾತಿಯೊಂದಿಗೆ ಪ್ರತಿಯೊಂದು ವಿಷಯದಲ್ಲೂ ಮನಸ್ಸು ಬಿಚ್ಚಿ ಮಾತನಾಡಿದರೆ ಸಂಬಂಧ ಮುರಿದು ಬಿಳುವ ಸಾಧ್ಯತೆಗಳೇ ಇರುವುದಿಲ್ಲ. ಮೊಬೈಲ್ ಕೈಯಲ್ಲಿ ಹಿಡಿದುಕೊಂಡರೆ ಸುತ್ತಲಿನ ಜಗತ್ತಿನ ಅರಿವೇ ಇಲ್ಲದಂತೆ ಇರುವುದು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಇದ್ದ ಸಮಯದಲ್ಲಿ ನಿಮ್ಮ ಸಂಗಾತಿಗೆ ಸಮಯ ಕೊಡಿ.