ರೆಸಿಪಿ- ಸಿಹಿ ಸಿಹಿಯಾದ ಅನಾನಸ್ ಕೇಸರಿಬಾತ್

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಕ್ಕಳು ಕೆಲವೊಮ್ಮೆ ಹಣ್ನುಗಳನ್ನು ಹಾಗೇ ತಿನ್ನಲು ಇಷ್ಟಪಡುವುದಿಲ್ಲ. ಆದರೆ ತಿಂಡಿಗಳನ್ನು ಮಕ್ಕಳು ಬೇಗ ಇಷ್ಟಪಡುತ್ತಾರೆ. ಆದ್ದರಿಂದ ಮಕ್ಕಳಿಗೆ ಹಣ್ಣುಗಳಿಂದ ಹಲವು ಬಗೆಯ ತಿಂಡಿಗಳನ್ನು ಮಾಡಿಕೊಡುತ್ತಾರೆ. ಕಾರಣ ಈ ಮೂಲಕವಾದರೂ ಆ ಹಣ್ಣುಗಳಲ್ಲಿರುವ ಪೋಷ್ಟಿಕಾಂಶ ಮಕ್ಕಳಿಗೆ ಸಿಗಲಿ ಎಂದು.
ಅದೇರೀತಿ ಅನಾನಸ್ ಹಣ್ಣನ್ನು ಕೂಡ ಕೆಲವು ಮಕ್ಕಳು ತಿನ್ನವುದಿಲ್ಲ. ಆದ್ದರಿಂದ ಅದರಿಂದ ರುಚಿಕರವಾದ ಕೇಸರಿಬಾತ್ ಮಾಡಿಕೊಡಿ. ಕೇಸರಿಬಾತ್ ಸಿಹಿ ಇರುವ ಕಾರಣ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ.

ಅನಾನಸ್ ಕೇಸರಿಬಾತ್ ಮಾಡಲು ಬೇಕಾಗುವ ಸಾಮಾಗ್ರಿಗಳು :

ರವಾ 1 ಕಪ್, ಹಾಲು 1 ಕಪ್, ಸಕ್ಕರೆ 1 ಕಪ್, ಅನಾನಸ್ 1 ಕಪ್(ಅನಾನಸ್ ನ್ನು ಸಿಪ್ಪೆ ತೆಗೆದು ಸಣ್ಣಗೆ ಕತ್ತಿರಿಸಿಟ್ಟುಕೊಳ್ಳಿ), ತುಪ್ಪ 1 ಚಮಚ, ಏಲಕ್ಕಿ ಪುಡಿ ½ ಚಮಚ, ಕೇಸರಿ ಸ್ವಲ್ಪ, ಗೋಡಂಬಿ ಸ್ವಲ್ಪ, ದ್ರಾಕ್ಷಿ ಸ್ವಲ್ಪ.

ಅನಾನಸ್ ಕೇಸರಿಬಾತ್ ತಯಾರಿಸುವ ವಿಧಾನ :

ಒಂದು ಪಾತ್ರೆ ತೆಗೆದುಕೊಂಡು ಅದರಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಅದು ಕಾದ ಮೇಲೆ ಅದಕ್ಕೆ ರವಾ ಹಾಕಿ ಹೊಂಬಣ್ಣ ಬರುವವರೆಗೂ ಹುರಿಯಿರಿ. ಇನ್ನೊಂದು ಬಾಣಲೆಯಲ್ಲಿ ಅನಾನಸ್ ಪೀಸ್ ಹಾಗೂ ಸಕ್ಕರೆ ಹಾಕಿ ಚೆನ್ನಾಗಿ 5 ನಿಮಿಷ ಕುದಿಸಿ ಒಂದು ಕಡೆ ಇಟ್ಟುಕೊಳ್ಳಿ.
ನಂತರ ಒಂದು ಪಾತ್ರೆಗೆ ಹುರಿದಿಟ್ಟುಕೊಂಡ ರವಾ ಹಾಕಿ ಸ್ವಲ್ಪ ಹಾಲು ಹಾಕಿ ಕಲಸಿ ಜೊತೆಗೆ ಸ್ವಲ್ಪ ನೀರು ಕೂಡ ಹಾಕಿಕೊಳ್ಳಿ. ಇಲ್ಲವಾದರೆ ರವಾ ಬೇಗ ಗಟ್ಟಿಯಾಗುತ್ತದೆ. ರವಾವನ್ನು ತಳ ಹಿಡಿಯದಂತೆ ತಿರುಗಿಸುತ್ತಾ ಇರಿ. ಆಮೇಲೆ ಅದಕ್ಕೆ ಸಕ್ಕರೆಯನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ಸಕ್ಕೆರೆ ಹಾಕಿ ಕುದಿಸಿಟ್ಟುಕೊಂಡ ಅನಾನಸ್ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಏಲಕ್ಕಿ ಪುಡಿ ಹಾಗೂ ಕೇಸರಿಯನ್ನು ಹಾಕಿ 5 ನಿಮಿಷ ಬೇಯಲು ಬಿಡಿ. ನಂತರ ಅದಕ್ಕೆ ಗೋಡಂಬಿ, ದ್ರಾಕ್ಷಿ ಹಾಕಿ ಮಿಕ್ಸ್ ಮಾಡಿ ಉರಿಯಿಂದ ಕೆಳಗಿಳಿಸಿ. ಇದನ್ನು ನಿಮಗೆ ಬೇಕಾದ ಆಕಾರದ ಬಟ್ಟಲಿಗೆ ಹಾಕಿ ಬಟ್ಟಲನ್ನು ತಿರುಗಿಸಿ, ನಂತರ ಅದಕ್ಕೆ ಸ್ವಲ್ಪ ಕೇಸರಿ ಹಾಕಿ ಅಲಂಕರಿಸಿದರೆ ಅನಾನಸ್ ಕೇಸರಿಬಾತ್ ಸವಿಯಲು ಸಿದ್ಧ.